ಟೈಫಾಯಿಡ್
ಸಾಲ್ಮೊನೆಲ್ಲ ಟೈಫಿ ಎಂಬ ಏಕಾಣುವಿನಿಂದ ಉಂಟಾಗುವ ಸೋಂಕು ಜ್ವರ. ಸತತ ಜ್ವರ. ಬಹಳ ದಿವಸಗಳವರೆಗೆ ಇರುವ ಏಕಾಣುಜೀವಿ ರಕ್ತತೆ (ಬ್ಯಾಕ್ಟೀರೀಮಿಯ), ಉದರಸಂಬಂಧ ಚಿಹ್ನೆಗಳು ಮತ್ತು ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುವ ಗುಲಾಬಿ ಬಣ್ಣದ ಚುಕ್ಕಿಗಳು-ಇವು ಈ ರೋಗದ ಮುಖ್ಯ ಲಕ್ಷಣಗಳು. ಕರುಳಿನಲ್ಲಿ ತೂತಾಗುವುದು ಮತ್ತು ಕರುಳಿನಿಂದ ರಕ್ರಸ್ರಾವ ಇವು ಈ ರೋಗದ ಮುಖ್ಯ ತೊಡಕುಗಳು.

ಕಾರಣವಿಜ್ಞಾನ (ಈಟಿಯಾಲಜಿ) ಮತ್ತು ಪಿಡುಗುವ್ಯಾಪನ ವಿಜ್ಞಾನ (ಎಪಿಡೆಮೀಯಾಲಜಿ). ಗ್ರಾಮ್‍ಋಣ ದಂಡಾಣು ಜೀವಿಗಳ ಪೈಕಿ ಒಂದಾದ ಸಾಲ್ಮೊನೆಲ್ಲ ಟೈಫಿ ಎಂಬ ವಿಷಾಣು ಈ ರೋಗದ ಕಾರಕ. ಒಣಗಿಸಿದರೆ ಇಲ್ಲವೇ (ಬರ್ಫದವರೆಗೂ) ತಣಿಸಿದರೆ ಇದು ತಾಳಿಕೊಂಡಿರುವುದು. ಆದರೆ ಕುದಿಯುವಿಕೆಯಲ್ಲಿ ಉಳಿಯಲಾರದು. ಹಾಲಿನಲ್ಲೂ ಹಾಲಿನ ಪದಾರ್ಥಗಳಲ್ಲೂ ಬಲು ಶೀಘ್ರವಾಗಿ ವರ್ಧಿಸುತ್ತದೆ. ಆದ್ದರಿಂದ ರೋಗ ಬರಲು ಮುಖ್ಯವಾದ ಒಂದು ಕಾರಣ ಇಂಥ ವಿಷಾಣುವಿನಿಂದ ಮಲಿನವಾದ ಹಾಲಿನ ಹಾಗೂ ಇತರ ಆಹಾರ ಪದಾರ್ಥಗಳ ಸೇವನೆ. ಸೋಂಕಿನ ಆಕರವೂ ಸಂಗ್ರಹಾಶಯವೂ ಮನುಷ್ಯನೇ. ಅರ್ಥಾತ್ ಬೇರೆ ಪ್ರಾಣಿಗಳಲ್ಲಿ ಈ ವಿಷಾಣುವಿನ ಸೋಂಕು ಉಂಟಾಗುವುದಿಲ್ಲ. ಟೈಫಾಯಿಡ್ ರೋಗಿಯ ಮಲದಲ್ಲಿ ಲಕ್ಷಗಟ್ಟಲೆ ವಿಷಾಣುಗಳಿರುವುವು. ಟೈಫಾಯಿಡ್ ವಾಹಕವ್ಯಕ್ತಿಗಳ ಮಲಗಳಲ್ಲಿಯೂ ಇವು ಇರುತ್ತವೆ. ಈ ವಿಷಾಣುಗಳು ಆಹಾರಪದಾರ್ಥಗಳೊಡನೆ ಬೆರೆತಾಗ ಸಹಜವಾಗಿ ಇವು ಟೈಫಾಯಿಡನ್ನು ಒಯ್ಯಲು ಮಾಧ್ಯಮಗಳಾಗುವುವು. ಆದ್ದರಿಂದ ರೋಗ ಬರದಂತೆ ಮಾಡಲು, ಬಂದಾಗ ಅದು ಹರಡದಂತೆ ಮಾಡಲು ಇರುವ ಉಪಾಯವೆಂದರೆ ಆಹಾರ ಪದಾರ್ಥಗಳ ಸೇವನೆಯಲ್ಲಿ ವಿಶೇಷ ಎಚ್ಚರ ಮತ್ತು ರೋಗಿಯ ಶುಶ್ರೂಷೆಯಲ್ಲಿ ಕಟ್ಟುನಿಟ್ಟಾದ ಶಿಸ್ತು. ಶುದ್ಧವಾದ ನೀರಿನ ಸರಬರಾಜು, ಮಾರುಕಟ್ಟೆ ಸಾರ್ವಜನಿಕ ಆಹಾರ ಹಾಗೂ ಶೌಚಗೃಹಗಳಲ್ಲಿ ವಿಶೇಷವಾದ ಚೊಕ್ಕಟತನ _ ಇವು ತೀರ ಅಗತ್ಯವಾದ ಎಚ್ಚರಿಕೆ ಕ್ರಮಗಳು.

	ಟ್ಯಫಾಯಿಡಿನ ವ್ಯಾಪ್ತಿ ಪ್ರಪಂಚದ ಸರ್ವತ್ರ ಉಂಟು; ಆದರೆ ಉಷ್ಣ ಹಾಗೂ ಉಪೋಷ್ಣವಲಯಗಳಲ್ಲಿ ಇದು ಕಂಡುಬರುವುದು ಜಾಸ್ತಿ. ಭಾರತದಲ್ಲಿ ಇದು ಪಿಡುಗಾಗಿಯೂ (ಎಪಿಡೆಮಿಕ್) ಸ್ಥಳೀಕವಾಗಿಯೂ (ಎಂಡೆಮಿಕ್) ಹರಡಿದೆ. ಬೇಸಗೆಕಾಲದಲ್ಲಿ, ಜನ ದಟ್ಟಣೆ ಇರುವಲ್ಲಿ, ಸಾರ್ವಜನಿಕ ಆರೋಗ್ಯ ಸ್ಥಿತಿಗಳು ಸಮರ್ಪಕವಾಗಿಲ್ಲದಲ್ಲಿ, ಇತ್ಯಾದಿಗಳಲ್ಲಿ ಇದರ ಹೊಡೆತ ಹೆಚ್ಚು. ಇದು ಎಲ್ಲವಯಸ್ಸಿನವರಿಗೂ ತಗಲುವ ರೋಗವಾದರೂ ಸಾಮಾನ್ಯವಾಗಿ 5ರಿಂದ 40 ವರ್ಷಗಳವರೆಗಿನ ವ್ಯಕ್ತಿಗಳೇ ಇದಕ್ಕೆ ಬಲಿಯಾಗುವುದು ಹೆಚ್ಚು. 

ರೋಗವಿಜ್ಞಾನ (ಪ್ಯಾಥಾಲಜಿ): ಟೈಫಾಯಿಡ್ ಜ್ವರ ಮುಖ್ಯವಾಗಿ ಉದರ ಸಂಬಂಧದ ಚಿಹ್ನೆಗಳಿರುವ ಏಕಾಣುಜೀವಿರಕ್ತತೆಯ ರೋಗ. ಬಾಯಿಯ ಮೂಲಕ ಪ್ರವೇಶಿಸಿದ ವಿಷಾಣುಗಳು ಸಣ್ಣಕರುಳಿನ ಲೋಳೆ ಪದರದ ಮೂಲಕವಾಗಿ ಮೀಸೆಂಟೆರಿಕ್ ದುಗ್ಧಗ್ರಂಥಿಗಳನ್ನು ಸೇರಿ ಅಲ್ಲಿ ಗುಣಿತಗೊಳ್ಳುತ್ತವೆ. ಅಲ್ಲಿಂದ ರಕ್ತವನ್ನು ಸೇರಿ ಯಕೃತ್ತು ಮತ್ತು ಗುಲ್ಮವನ್ನು ತಲಪುತ್ತವೆ. ಈ ಜಾಗಗಳಲ್ಲಿ ರೋಗದ ಪರಿಪಾಕಾವಸ್ಥೆಯಲ್ಲಿ ಅವು ಗುಣಿತಗೊಳ್ಳುತ್ತವೆ. ಹೀಗೆ ಗುಣಿತಗೊಂಡ ಸೂಕ್ಷ್ಮಜೀವಿಗಳು ಪುನಃ ರಕ್ತವನ್ನು ಸೇರಿದಾಗ ಮತ್ತು ಏಕಾಣು ಜೀವಿರಕ್ತತೆ ಉಂಟಾದಾಗ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತವೆ. ರಕ್ತದಿಂದ ವಿಷಾಣುಗಳು ದುಗ್ಧರಸಗ್ರಂಥಿಗಳಿಗೂ ಸಣ್ಣಕರುಳಿನ ಪೇಯರ್ಸ್ ತೇಪೆಗಳಿಗೂ ಹೋಗುತ್ತವೆ. ಪೇಯರ್ಸ್ ತೇಪೆಗಳು ಹೆಗ್ಗಳಿಸಿ ಅಲ್ಲಿ ಬಾವು ಉಂಟಾಗುತ್ತದೆ. ಇದರಿಂದ ಸಣ್ಣಕರುಳಿನ ರಕ್ತನಾಳಗಳಲ್ಲಿ ರಕ್ತಸಂಚಾರಕ್ಕೆ ಅಡಚಣೆಯಾಗಿ ಲೋಳೆಪೊರೆ ನಾಶವಾಗುತ್ತದೆ. ಪರಿಣಾಮ ಸಣ್ಣಕರುಳಿನ ನೀಳ ಅಕ್ಷದಲ್ಲಿ ವ್ರಣಗಳು ಉಂಟಾಗುತ್ತವೆ. ವ್ರಣಗಳ ತೀವ್ರವಾಗುತ್ತ ಮುಂದುವರಿದರೆ ರಕ್ತನಾಳಗಳು ಒಡೆದು ರಕ್ತಸ್ರಾವವಾಗಬಹುದು ಮತ್ತು ಕರುಳಿನಲ್ಲಿ ರಂಧ್ರ ಉಂಟಾಗಬಹುದು. ವ್ರಣಗಳು ಹೆಚ್ಚಾಗಿ ಹಿಂಗುರುಳಿನ (ಐಲಿಯಮ್) ಕಡೆಯ ಭಾಗದಲ್ಲಿರುತ್ತವೆ. ಜ್ವರ ಶುರುವಾದ ಮೂರು ವಾರದ ಬಳಿಕ ವ್ರಣಗಳು ವಾಸಿಯಾಗುವುದಕ್ಕೆ ಪ್ರಾರಂಭವಾಗುತ್ತವೆ.

	ಕಾಯಿಲೆಯ ಶುರುವಿನಲ್ಲೇ ಔಷಧಿಯನ್ನು ವೈದ್ಯರ ಆದೇಶಾನುಸಾರ ಕೊಟ್ಟರೆ ಲೋಳೆ ಪೊರೆ ನಿರ್ಜೀವಹೊಂದಿ ಅಲ್ಲಿ ವ್ರಣಗಳಾಗುವುದನ್ನು ತಪ್ಪಿಸಬಹುದು ಎಂದು ಕೆಲವರ ಅಭಿಪ್ರಾಯ. ಕಾಯಿಲೆಯಿಂದಾಗಿ ಮಿಸಿಂಟ್ರಿಕ್ ದುಗ್ಧ ಗ್ರಂಥಿಗಳು ದೊಡ್ಡದಾಗುತ್ತವೆ. ಯಕೃತ್ತಿನಿಂದ ಪಿತ್ತಕೋಶಕ್ಕೆ ಸೂಕ್ಷ್ಮಜೀವಿಗಳು ಪ್ರವೇಶಿಸಬಹುದು. ಮೂತ್ರಜನಕಾಂಗದಲ್ಲೂ ಗುಂಡಿಗೆಯ ಮಾಂಸದಲ್ಲೂ ಇತರ ಅನೇಕ ಅಂಗಾಂಗಗಳಲ್ಲೂ ಬದಲಾವಣೆಗಳು ಕಂಡುಬರಬಹುದು. 

ರೋಗಲಕ್ಷಣಗಳು : ಸಾಮಾನ್ಯವಾಗಿ ಈ ರೋಗದ ಪರಿಪಾಕಾವಸ್ಥೆ 10-14 ದಿವಸಗಳು, ಕೆಲವು ಸಲ ಇದು 3 ದಿವಸದಿಂದ 60 ದಿವಸಗಳವರೆಗೂ ಇರಬಹುದು. ಟೈಫಾಯಿಡ್ ರೋಗದ ತೀವ್ರತೆ ಸೂಕ್ಷ್ಮಜೀವಿಗಳ ಸಂಖ್ಯೆ (ಸೋಂಕಿನ ಗಾತ್ರ ಇಲ್ಲವೆ ಗುಟ್ಟಿ), ಮನುಷ್ಯನಲ್ಲಿರುವ ಸಹಜ ಪ್ರತಿರೋಧ ಮತ್ತು ಸೂಕ್ಷ್ಮಜೀವಿಗಳ ವಿಷಮತೆಗಳನ್ನು ಅವಲಂಬಿಸಿದೆ. ನಿರ್ದಿಷ್ಟ ಚಿಕಿತ್ಸೆ ಕೊಡದಿದ್ದಾಗ ರೋಗದ ಲಕ್ಷಣ ಈ ಮುಂದಿನಂತೆ ಇರುತ್ತವೆ. ಅವಧಿ 4 ವಾರಗಳು.

ಮೊದಲನೆಯ ವಾರ : ತಲೆನೋವು, ಅಗ್ನಿಮಾಂದ್ಯ ಮತ್ತು ಲವಲವಿಕೆ ಇಲ್ಲದಿರುವಿಕೆ ಇವುಗಳ ಸಮೇತ ಟೈಫಾಯಿಡ್ ಕಾಯಿಲೆ ನಿಧಾನವಾಗಿ ಶುರುವಾಗಿ 2-3 ದಿವಸಗಳಲ್ಲಿ ಪ್ರಬಲಿಸುತ್ತದೆ. ಗಂಟಲುನೋವು, ಕೆಮ್ಮು, ನಡುಕ, ಚಳಿ ಇವೂ ಇರಬಹುದು. ರೋಗಿ ಈ ವೇಳೆಯಲ್ಲಿ ಕೆಲಸಕ್ಕೆ ಹೋಗುತ್ತಿರಲೂಬಹುದು. ಆದರೆ 3-7 ದಿವಸಗಳಲ್ಲಿ ಆತ ಹಾಸಿಗೆ ಹಿಡಿಯುತ್ತಾನೆ. ಹೊಟ್ಟೆಯಲ್ಲಿ ತೊಂದರೆ, ಮಲಬದ್ಧತೆ ಅಥವಾ ಭೇದಿ ಶುರುವಾಗುವುವು. ಜ್ವರದ ವಕ್ರರೇಖೆ ದಿನದಿನವೂ ಏಣಿಯ ಮೆಟ್ಟಲಿನ ಹಾಗೆ ಏರುತ್ತ ಹೋಗುತ್ತದೆ. ಜ್ವರ ಬೆಳಗ್ಗಿನಂತೆ ರಾತ್ರಿ ಜಾಸ್ತಿ. ವಾರದ ಕೊನೆಯಲ್ಲಿ ವ್ಯಕ್ತಿ ವ್ಯಾಧಿಗ್ರಸ್ತನಂತೆ ಕಾಣಿಸುತ್ತಾನೆ. ಆಗ ಹಸಿವು ಬಲು ಕಡಿಮೆಯಾಗುತ್ತದೆ; ಮತ್ತು ಕಿವಿಯಲ್ಲಿ ಮಂದತ್ವ ಉಂಟಾಗಬಹುದು. ನಾಲಿಗೆಯ ಅಗ್ರ ಅಥವಾ ದೋಷ ಕಂಡುಬರುತ್ತದೆ. ಬ್ರಾಂಕೈಟಿಸ್ ಚಿಹ್ನೆಗಳು ಇರಬಹುದು. ನಾಡಿಬಡಿತ ಜಾಸ್ತಿಯಾಗುವುದು. ಆದರೆ ಅದರ ದರ ಏರಿದ ಜ್ವರಕ್ಕೆ ಅನುಗುಣವಾಗಿರುವುದಿಲ್ಲ. ಜ್ವರವು 390ಛಿ ಇದ್ದಾಗ ನಾಡಿಯ ದರ ಮಿನಿಟಿಗೆ 80 ಅಥವಾ 90 ಇರಬಹುದು. ಗುಲ್ಮ ದೊಡ್ಡದಾಗುತ್ತದೆ. ತುಂಬಾ ಅಪರೂಪವಾಗಿ ಕೆಲವು ರೋಗಿಗಳಲ್ಲಿ ಗುಲಾಬಿಕೆಂಪು ಗುಳ್ಳೆಗಳು ಉದರದ ಮೇಲೆ ಕಾಣಿಸಿಕೊಳ್ಳುತ್ತವೆ. ಇವು ದುಂಡಗೆ, ಕೆಂಪಾಗಿ ಮತ್ತು ಚುಕ್ಕಿ ಮಿಟ್ಟಿದದ್ದುಗಳಾಗಿರುತ್ತವೆ. ಇವು ಗುಂಪಾಗಿ ಒಂದೊಂದರ ಮೇಲೊಂದು ಬರಬಹುದು. ಕಪ್ಪು ಚರ್ಮದ ಮೇಲೆ ಇವು ಕಾಣಿಸುವುದು ವಿರಳ. ಏಕಾಣುಜೀವಿಗಳು ರಕ್ತನಾಳಗಳಲ್ಲಿರುವುದೇ ಈ ಕೆಂಪು ಗುಳ್ಳೆಗಳಿಗೆ ಕಾರಣ. ಗುಳ್ಳೆಗಳ ಗಾತ್ರ 2-4ಮಿ.ಮೀ.ನಷ್ಟಿರುವುದು. ಒತ್ತಿದಾಗ ಇವು ಮಾಯವಾಗುತ್ತವೆ. 3-4 ದಿವಸಗಳಲ್ಲಿ ಪೂರ್ಣ ಕಣ್ಮರೆಯಾಗುತ್ತವೆ.

ಎರಡನೆಯ ವಾರ : ಏರಿದ ಜ್ವರ ಹಾಗೆಯೇ ಇರುತ್ತದೆ. ಬೆಳಗ್ಗೆ 380-390ಛಿ ಇದ್ದು ಸಂಜೆ 390-400ಛಿ ಯಷ್ಟಿರುತ್ತದೆ. ನಾಡಿಯ ವೇಗ ಜಾಸ್ತಿಯಾಗಬಹುದು. ರೋಗಿ ಬಹು ನಿಶ್ಯಕ್ತನಾಗಿರುತ್ತಾನೆ. ಕಾಯಿಲೆಯ ಮುಖ ಎದ್ದು ತೋರುತ್ತದೆ. ಹಲ್ಲಿನ ಮೇಲೆ ಗಲೀಜು ಕಟ್ಟುತ್ತದೆ. ಬಾಯಿ ಒಣಗಿದ್ದು ಅಂಟಾದ ಲೋಳೆ ಅಲ್ಲಿರುವುದು (ಸ್ಟಿಕ್ಕಿ ಮ್ಯೂಕಸ್). ತುಟಿ ಒಣಗಿ ಬಿರಿಯತ್ತದೆ. ರೋಗಿ ಮಂಕಾಗುತ್ತಾನೆ. ಬಡಬಡಿಕೆ ಉಂಟಾಗಬಹುದು. ಉದರ ಉಬ್ಬಿಕೊಂಡಿರುತ್ತದೆ. ದಿನಕ್ಕೆ 5-6 ಸಲ ಭೇದಿಯಾಗಬಹುದು. ಈ ವಿಸರ್ಜನೆ ಹಳದಿ ಬಣ್ಣದ ನೀರುನೀರಾಗಿ ಅತಿ ವಾಸನೆಯಿಂದ ಕೂಡಿರುತ್ತದೆ. ಮತ್ತು ಅದರಲ್ಲಿ ಹಸಿರು ಅಥವಾ ಕಪ್ಪು ಬಣ್ಣದ ಉಸುಬುಗಳಿರಬಹುದು. ಆದರೆ ಹೊಟ್ಟೆ ನುಲಿತವಿರುವುದಿಲ್ಲ. ಭೇದಿಯಲ್ಲಿ ರಕ್ತವಿರುವುದಿಲ್ಲ. ಗುಲ್ಮ ಮೊದಲಿಗಿಂತ ದೊಡ್ಡದಾಗುತ್ತದೆ. ಬ್ರಾಂಕೊ ನ್ಯುಮೋನಿಯ ಉಂಟಾಗಬಹುದು.

ಮೂರನೆಯ ವಾರ : ಗುಣವಾಗುವ ಪಕ್ಷದಲ್ಲಿ 14-15 ದಿವಸಗಳಾಗುವಾಗ ಕಮ್ಮಿಯಾಗುತ್ತ ಬಂದು 21 ದಿವಸಗಳ ಅವಧಿಯಲ್ಲಿ ಸಾಮಾನ್ಯಸ್ಥಿತಿಗೆ ಬರುತ್ತದೆ. ನಾಡಿಯ ವೇಗ, ನಂಜುನೆತ್ತರು, ಹೊಟ್ಟೆಯ ಸಂಬಂಧದ ಲಕ್ಷಣಗಳು ಎಲ್ಲವೂ ಕಮ್ಮಿಯಾಗುತ್ತವೆ. ಹಸಿವು ಉಂಟಾಗುತ್ತದೆ. ಮತ್ತು ರೋಗಿ ನಾಲ್ಕನೆಯ ವಾರದಲ್ಲಿ ಕ್ರಮೇಣ ಗುಣಹೊಂದುತ್ತಾನೆ. ರೋಗ ಗುಣವಾಗದೇ ಇರುವ ಪಕ್ಷದಲ್ಲಿ ಮೂರನೆಯ ವಾರವೇ ಅತ್ಯಂತ ಅಪಾಯಕಾರಿಯಾದ ಅವಧಿ. ರೋಗಚಿಹ್ನೆಗಳು ತೀವ್ರಸ್ವರೂಪವನ್ನು ತಾಳಿ ರೋಗಿ ವಿಷಮಸ್ಥಿತಿಗೆ ಹೋಗುತ್ತಾನೆ. ಅರೆಜ್ಞಾನವುಳ್ಳವನಾಗಿ ಬಾಡಿ, ನೀಲಿಗಟ್ಟಿ ಬಡಬಡಿಸುತ್ತ ಹಾಸಿಗೆಯ ಮೇಲೆ ಬಿದ್ದಿರುತ್ತಾನೆ. ಕೈಕಾಲುಗಳು ನಡುಗುತ್ತಿರುತ್ತವೆ. ಈ ಸ್ಥಿತಿಯಲ್ಲಿರುವ ರೋಗಿ ಗುಣಹೊಂದುವುದು ತೀರ ಕಡಿಮೆ. ಟೈಫಾಯಿಡ್ ಕಾಯಿಲೆಯ ಮುಖ್ಯ ತೊಡಕುಗಳಾದ ಕರುಳಿನ ತೂತು ಮತ್ತು ಕರುಳಿನ ರಕ್ತಸ್ರಾವ ಮೂರನೆಯ ವಾರದಲ್ಲೇ ಸಾಮಾನ್ಯವಾಗಿ ಉಂಟಾಗುತ್ತವೆ.

ಟೈಫಾಯಿಡ್ ರೋಗಸ್ವರೂಪದಲ್ಲೂ ಲಕ್ಷಣಗಳಲ್ಲೂ ಅನೇಕ ಬದಲಾವಣೆಗಳು ಕಂಡುಬರಬಹುದು. ರೋಗ ಬಹಳ ಸೌಮ್ಯದ್ದಾಗಿರಬಹುದು. ಇಲ್ಲವೇ ತೀವ್ರವಾಗಿದ್ದು ಮೆನಿನ್‍ಜೈಟಿಸ್ ಅಥವಾ ನ್ಯುಮೋನಿಯ ಕಾಯಿಲೆ ಲಕ್ಷಣಗಳನ್ನು ಹೋಲಬಹುದು. ಹೀಗಿದ್ದಲ್ಲಿ ಇವುಗಳಿಂದ ಟೈಫಾಯಿಡ್ ಬೇರೆ ಆಗಿರುವುದನ್ನು ಬೇರೆ ಗುಣಲಕ್ಷಣಗಳಿಂದ ಗುರುತಿಸಬೇಕು. ಆದರೆ ಸಾಮಾನ್ಯವಾಗಿ ವಾಂತಿ, ನಡುಕ, ಚಳಿ ಮತ್ತು ತೀವ್ರಜ್ವರದೊಡನೆ ಟೈಫಾಯಿಡ್ ಕಾಯಿಲೆ ಶುರುವಾಗುವುದು ವಾಡಿಕೆ. ಟೈಫಾಯಿಡ್ ರೋಗದ ತೀವ್ರತೆಯನ್ನು ಸರಿಯಾದ ಮತ್ತು ನಿರ್ದಿಷ್ಟವಾದ ಔಷಧಿ ಕೊಡುವುದರಿಂದ ಬಹಳ ಕಮ್ಮಿ ಮಾಡಬಹುದು.
ಮರುಕಳಿಸುವುದು : ಇದು 100ಕ್ಕೆ 10 ರೋಗಿಗಳಲ್ಲಿ ಉಂಟಾಗಬಹುದು. ಔಷಧ ನಿಲ್ಲಿಸಿದ 10-12 ದಿವಸಗಳಲ್ಲಿ ರೋಗ ಚಿಹ್ನೆಗಳು ಪುನಃ ಕಾಣಿಸಿಕೊಳ್ಳುತ್ತವೆ; ಆದರೆ ಅವು ಬಲುಮಟ್ಟಿಗೆ ಸೌಮ್ಯಸ್ವರೂಪವುಳ್ಳದ್ದಾಗಿರುತ್ತವೆ ಮತ್ತು ಹೆಚ್ಚು ದಿವಸವಿರುವುದಿಲ್ಲ. 

ವಾಹಕವ್ಯಕ್ತಿಗಳು (ಕ್ಯಾರಿಯರ್ಸ್) : ತಾವು ಸೋಂಕುಗೊಂಡು ಆದರೆ ರೋಗವನ್ನು ಅನುಭವಿಸದೆ ರೋಗಾಣುಗಳನ್ನು ಇತರರಿಗೆ ಹರಡುವ ವ್ಯಕ್ತಿಗಳಿವರು. ಕಾಯಿಲೆ ಗುಣವಾದ ಮೇಲೂ ಹಲವು ವಾರ ಟೈಫಾಯಿಡ್ ರೋಗಾಣುಗಳನ್ನು ಮಲದಲ್ಲಿ ವಿಸರ್ಜಿಸುತ್ತಿರುವ ವ್ಯಕ್ತಿಗಳಿಗೂ ಈ ಹೆಸರಿದೆ. ಕೆಲವರು ವರ್ಷಗಟ್ಟಲೆ ಟೈಫಾಯಿಡ್ ರೋಗಾಣುಗಳನ್ನು ಮಲದಲ್ಲಿ ವಿಸರ್ಜಿಸುತ್ತಿರುತ್ತಾರೆ. ಇವರಿಗೆ ಚಿರಕಾಲಿಕ ವಾಹಕರೆಂದು (ಕ್ರಾನಿಕ್ ಕ್ಯಾರಿಯರ್ಸ್) ಹೆಸರು. ಮಕ್ಕಳಲ್ಲಿ ಚಿರಕಾಲಿಕ ವಾಹಕರಿರುವುದು ವಿರಳ. ಹೆಂಗಸರಲ್ಲಿ ಹೆಚ್ಚು.

ತೊಡಕುಗಳು : ಟೈಫಾಯಿಡ್ ರೋಗದ ಅತಿಮುಖ್ಯವಾದ ಮತ್ತು ಅಪಾಯಕರವಾದ ತೊಡಕುಗಳು ಕರುಳಿನಲ್ಲಿ ತೂತಾಗುವುದು ಮತ್ತು ಕರುಳಿನ ರಕ್ತಸ್ರಾವ. ಇವಲ್ಲವೆ ಟೈಫಾಯಿಡ್‍ನಲ್ಲಿ ಯಾವ ಅಂಗವಾದರೂ ಕಾಯಿಲೆಗೆ ಒಳಪಟ್ಟು ಅನೇಕ ತೊಡಕುಗಳುಂಟಾಗಬಹುದು. ಇವುಗಳಲ್ಲಿ ನ್ಯುಮೋನಿಯ, ಥ್ರೋಂಬೋಫ್ಲೈಬೈಟಿಸ್, ಮಯೊಕಾರ್ಡೈಟಿಸ್, ಮಯೋಸೈಟಿಸ್, ಆತ್ರ್ರೈಟಿಸ್, ಪೆರಿಯೊಸ್ಟೈಟಿಸ್, ಆಸ್ಟಿಯೋಮೈಯೆಲಿಟಿಸ್, ಮೆನಿನ್‍ಜೈನಟಿಸ್-ಇವು ಮುಖ್ಯವಾದವು. ಕೂದಲು ಉದುರುವಿಕೆ, ಕಿವಿಮಂದತ್ವ, ನ್ಯೂರೈಟಿಸುಗಳೂ ಉಂಟಾಗಬಹುದು.

ರೋಗನಿದಾನ (ಡಯಗ್ನೋಸಿಸ್) : 1 ವರ್ಣರಹಿತ ರಕ್ತಕಣಗಳು ಕಮ್ಮಿಯಾಗಿರುತ್ತವೆ. ಸಾಮಾನ್ಯವಾಗಿ 3000-4000/ಛಿ. mm. ಇರುತ್ತವೆ. 2 ರೋಗಾಣುಗಳನ್ನು ರೋಗಿಯ ರಕ್ತ, ಮಲ ಮತ್ತು ಮೂತ್ರದಿಂದ ಕೃಷಿಕೆಮಾಡಿ (ಕಲ್ಚರ್) ಪಡೆಯಬಹುದು. ಮೊದಲನೆಯ ವಾರದಲ್ಲಿ 70-90% ರೋಗಿಗಳ ರಕ್ತದಲ್ಲಿ, ಮೂರನೆಯ ವಾರದಲ್ಲಿ 30%-40% ರೋಗಿಗಳ ರಕ್ತದಲ್ಲಿ ಟೈಫಾಯಿಡ್ ರೋಗಾಣುಗಳನ್ನು ಕೃಷಿ ವಿಧಾನದಿಂದ ಪಡೆಯಬಹುದು. ರೋಗ ಶುರುವಾದ 10 ದಿವಸಗಳ ಬಳಿಕ ರೋಗಿಯ ಮಲದಿಂದ ಟೈಫಾಯಿಡ್ ರೋಗಾಣುಗಳನ್ನು ಕೃಷಿಕೆಮಾಡಿ ಪಡೆಯಬಹುದು. 3 ಅಂಟಣಿವಿಧಾನ (ಅಗ್ಲೂಟಿನೇಷನ್ ಮೆಥಡ್) : ರೋಗವನ್ನು ಪತ್ತೆಹಚ್ಚುವಲ್ಲಿ ಈ ವಿಧಾನ ಬಹಳ ಉಪಯುಕ್ತವಾಗಿದೆ (ವೈಕಾಲ್ ಪರೀಕ್ಷೆ).

ರೋಗಲಕ್ಷಣಗಳಲ್ಲಿ ಟೈಫಾಯಿಡ್ ಅನೇಕ ರೋಗಗಳನ್ನು ಹೋಲುತ್ತದೆ. ಇವುಗಳಲ್ಲಿ ಕ್ಷಯ, ಮಲೇರಿಯ, ಫ್ಲೂ, ಟೈಫಸ್ ಜ್ವರ, ಕಾಲಾ ಅಸಾóರ್, ಟ್ರಿಪನೋಸೋಮಿಯಾಸಿರಾ ಬುಸೆಲ್ಲೊಸಿಸ್ ಹಲವು, ಮೆನಿನ್‍ಜೈಟಿಸ್, ನ್ಯೂಮೋನಿಯಗಳನ್ನು ಮೇಲೆಯೇ ಹೇಳಿದೆ. ಈ ರೋಗಗಳಿಂದ ಭಿನ್ನವಾಗಿ ಟೈಫಾಯಿಡ್ ರೋಗವನ್ನು ಗುರುತಿಸಬೇಕಾದುದು ಅಗತ್ಯ.

ಚಿಕಿತ್ಸಾವಿಧಾನ : ರೋಗಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಸುವುದು ಒಳ್ಳೆಯದು. ಮೈಲಿಗೆಯಾದ ಹಾಸಿಗೆ ಬಟ್ಟೆಗಳನ್ನು 5% ಲೈಸಾಲ್‍ನಲ್ಲಿಟ್ಟು ಬಳಿಕ ಅಗಸನಿಗೆ ಕಳುಹಿಸಬೇಕು. ಟೈಫಾಯಿಡ್ ವಿಷಾಣುಗಳು ರೋಗಿಯ ಮಲಮೂತ್ರದಲ್ಲಿರುವುದರಿಂದ. ಮಲಮೂತ್ರಗಳನ್ನು 5% ಕಾರ್ಬಾಲಿಕ್ ಆಮ್ಲ ಇರುವ ಪಾತ್ರೆಗಳಲ್ಲಿ ಶೇಖರಿಸಿ 2 ಗಂಟೆಯಾದ ಬಳಿಕ ನಾಶಮಾಡಬೇಕು. ರೋಗಿಯ ಶುಶ್ರೂಷೆಮಾಡಿದ ಮೇಲೆ ಕೈಗಳನ್ನು ಸಾಬುನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು ರೋಗಿ ಮಲಗಿಕೊಂಡು ಪೂರ್ಣವಿಶ್ರಾಂತಿ ಪಡೆಯಬೇಕು. ಪಕ್ಕಕ್ಕೆ ಹೊರಳಬಹುದು. ಈ ವಿಶ್ರಾಂತಿಯು ಜ್ವರ ಇರುವತನಕ ಮತ್ತು ಜ್ವರ ಬಿಟ್ಟ 3-4 ದಿವಸಗಳವರೆಗೂ ಅಗತ್ಯ. ಆಮೇಲೆ ನಿಧಾನವಾಗಿ ಕೂರುವುದು ಮತ್ತು ನಡೆದಾಡುವುದಕ್ಕೆ ಶುರುಮಾಡಬಹುದು. ರೋಗಿಗೆ ಕೊಡುವ ಆಹಾರ ಹೆಚ್ಚು ಶಕ್ತಿದಾಯಕವಾಗಿರಬೇಕು ಮತ್ತು ಬಹಳ ಮೆದುವಾಗಿರಬೇಕು. ಆಹಾರದಲ್ಲಿ ನೀರಿನ ಪ್ರಮಾಣ ಜಾಸ್ತಿ ಇರಬೇಕು. ಜ್ವರವಿದ್ದಾಗ ಹಾಲು, ಚಹ, ಕಾಫಿ, ಕೋಕೋ, ಹಾರ್ಲಿಕ್ಸ್, ಮಜ್ಜಿಗೆ, ಹಣ್ಣಿನ ರಸ, ಸೂಪ್ಸ್, ಅಲ್ಬುಮಿನ್ ನೀರು ಮತ್ತು ಗಂಜಿ-ಇವನ್ನು ಕೊಡಬಹುದು.

ನಿರ್ದಿಷ್ಟ ಚಿಕಿತ್ಸೆ : ಕ್ಲೋರಮ್‍ಫಿನಿಕಾಲ್ ಎಂಬ ಪ್ರತಿಜೈವಿಕ ಔಷಧಿ ಟೈಫಾಯಿಡ್ ಕಾಯಿಲೆಗೆ ಉತ್ತಮ ಔಷಧಿಯಾಗಿದ್ದಿತು. ಈಗ ಈ ಜೀವಿರೋಧಕದ ವಿರುದ್ಧ ಟೈಫಾಯಿಡ್ ಸೂಕ್ಷ್ಮಜೀವಿಗಳು ಅಜೇಯತ್ವ ಪಡೆದಿರುವುದು ಗೋಚರಿಸಿದೆ. ಅದರ ಬದಲು ಆಂಪಿಸಿಲಿನ್ ಅಥವಾ ಟ್ರಮೆಥೊಪ್ರಿಮ್ - ಸಲ್ಫಮೆಥಾಕ್ಸಜೇಲ್ ಬಳಕೆಗೆ ಬಂದಿದ್ದವು. ಅವುಗಳ ಪರಿಣಾಮವೂ ತೃಪ್ತಿಕರವಾಗಿಲ್ಲದಿರುವುದರಿಂದ, ಸಿಫಲೋಸ್ಪೋರಿನ್ 3ನೇ ತಲೆಮಾರು ಮತ್ತು ಫ್ಲೂರೋಕ್ವಿನಲೋನ್ ಔಷಧಿಗಳನ್ನು ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ.

ರೋಗನಿರೋಧ (ಪ್ರೊಫೈಲ್ಯಾಕ್ಸಿಸ್) : ಒಳ್ಳೆಯ ನೀರಿನ ಸರಬರಾಜು, ನೋಣಗಳನ್ನು ನಾಶಮಾಡುವುದು, ಚಿರಕಾಲಿಕ ವಾಹಕರನ್ನು ಚಿಕಿತ್ಸೆಮಾಡುವುದು ಇವುಗಳಿಂದ ರೋಗವನ್ನು ತಡೆಗಟ್ಟಬಹುದು. ಟೈಫಾಯಿಡ್ ರೋಗದ ಪ್ರತಿರೋಧದಲ್ಲಿ ಎರಡು ಬಗೆಯ ಲಸಿಕೆಗಳು ಲಭ್ಯ: ಅವು ಬಾಯಿ ಲಸಿಕೆ ಮತ್ತು ಚುಚ್ಚು ಲಸಿಕೆ. ಬಾಯಿ ಲಸಿಕೆ ರೋಗೋತ್ಪಾದಕ ಶಕ್ತಿಯನ್ನು ದಮನಗೊಳಿಸಿದ ಸಾಲ್ಮೊನೆಲ್ಲ ಟೈಫಿ ರೂಪಾಂತರಗಳನ್ನು ಒಳಗೊಂಡಿದೆ. ಅಂತಹ ಒಂದು ಮಾತ್ರೆಯನ್ನು ಆಹಾರ ಸೇವನೆಯ ಒಂದು ಘಂಟೆ ಮೊದಲು ಮೊದಲ ದಿನ, ಮೂರನೇಯ ದಿನ ಮತ್ತು ಐದನೇಯ ದಿನ ತೆಗೆದುಕೊಳ್ಳಬೇಕು. ಅದನ್ನು ಮೂರು ವರುಷಗಳಿಗೊಮ್ಮೆ ಪುನರಪಿ ಕೊಟ್ಟಾಗ ಪ್ರತಿರೋಧ ಶಕ್ತಿಯನ್ನು ಪ್ರಬಲಗೊಳಿಸಿ ಅದನ್ನು ದೀರ್ಘಾವಧಿಕಾಲ ರಕ್ಷಿಸುತ್ತದೆ. ರೋಗ ಪ್ರತಿರೋಧ ಶಕ್ತಿಯನ್ನು ಕಳೆದುಕೊಂಡವರಿಗೆ, ಗರ್ಭಿಣಿಯರಿಗೆ, ಜೀವಾಣುರೋಧಕಗಳನ್ನು ಪಡೆಯುತ್ತಿರುವವರಿಗೆ, ಜ್ವರ, ಕರುಳ ಸೋಂಕು ಇದ್ದಾಗ ಮತ್ತು 6ವರ್ಷ ವಯಸ್ಸಿನ ಕೆಳಗಿನವರೆಗೆ ಸಲ್ಲದು. 

ವಿಪಿ ಕೋಶಕ್ಕೆ ಸಂಬಂಧಿಸಿದ ಚುಚ್ಚು ಲಸಿಕೆಯನ್ನು ಅರ್ಧ ಮಿ.ಲೀ. ಪ್ರಮಾಣದಲ್ಲಿ ಸ್ನಾಯುವಿನೊಳಕ್ಕೆ ಪ್ರತಿ 3 ವರ್ಷಗಳಿಗೊಮ್ಮೆ ಕೊಡಬೇಕು. ಇದು ಬಾಯಿ ಲಸಿಕೆಯ ಬದಲು ಉಪಯೋಗಕ್ಕೆ ಅರ್ಹ. ಅದರ ಕೊಡುಗೆ ಗರ್ಭಿಣಿಯರಿಗೆ ಸಲ್ಲದು. ಅದನ್ನು 2 ವರುಷಗಳಿಗೆ ಮೇಲ್ಪಟ್ಟವರಿಗೆಲ್ಲ ಕೊಡಬಹುದು. ಅದು ವ್ಯಕ್ತಿಗಳಲ್ಲಿ ಪ್ರತಿ ವಸ್ತುಗಳ ಬೆಳೆವಣಿಗೆಯನ್ನು ಬಹುಬೇಗ ಉದ್ದೀಪಿಸುತ್ತದೆ.
(ಜಿ.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ